Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-13

ಉತ್ತರ ಕನ್ನಡದಲ್ಲಿ ದುರಂತಗಳ ಭ್ರಮೆ – ರಕ್ಷಣಾ ಕಾರ್ಯ ಸತ್ಯ, ಘಟನೆಗಳು ಕೇವಲ ಕಲ್ಪನೆ!

News Details

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 12ರ ಒಂದೇ ದಿನ ಹಲವು ಅವಘಡ ನಡೆದಿದೆ. ಬಾಂಬ್ ದಾಳಿ, ಅಗ್ನಿ ದುರಂತ, ಕಟ್ಟಡ ಕುಸಿತ, ಅಣು ವಿಕರಣ ಸೋರಿಕೆ ಸೇರಿ ಹಲವು ಅವಘಡದಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಜಿಲ್ಲಾಡಳಿತ ರಕ್ಷಿಸಿದೆ. ಜಿಲ್ಲಾಡಳಿತ ಜನರನ್ನು ರಕ್ಷಿಸಿದ್ದು ಸತ್ಯ. ಆದರೆ, ನಡೆದ ದುರಂತ ನಿಜವಲ್ಲ!

ತುರ್ತು ಸನ್ನಿವೇಶವನ್ನು ಕೃತಕವಾಗಿ ಸೃಷ್ಠಿಸಿಕೊಂಡ ಜಿಲ್ಲಾಡಳಿತ ಜನ ಜಾಗೃತಿ ಹಾಗೂ ಅಧಿಕಾರಿ-ಸಿಬ್ಬಂದಿ ತರಬೇತಿಗಾಗಿ ಈ ದಿನ ಅಣಕು ಪ್ರದರ್ಶನ ನಡೆಸಿದೆ. ಅದರ ಪ್ರಕಾರ ಕಾರವಾರದ ಗ್ರಾಸಿಂ ಅನಿಲ ಘಟಕದಲ್ಲಿ ಬಾಂಬ್ ದಾಳಿಯಿಂದ ಹಾನಿಯಾದ ಕಟ್ಟಡದಲ್ಲಿ ಸಿಲುಕಿದ್ದ 37 ಮಂದಿಯ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ 11 ಮಂದಿಯ ಜೀವ ಕಾಪಾಡಲಾಗಿದೆ. ನೌಕಾನೆಲೆ ಪ್ರದೇಶದ ಸಿವಿಲ್ ಕಾಲೋನಿಯಲ್ಲಿ ಬೆಂಕಿ ಆಕಸ್ಮಿಕದಿಂದ 11 ಮಂದಿಯನ್ನು ರಕ್ಷಿಸಲಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ದಾಳಿಯಿಂದ ಗಾಯಗೊಂಡ 10 ಜನರನ್ನು ಬೇರೆ ಕಡೆ ಸ್ಥಳಾಂತರಿಸಲಾಯಿತು. ರವೀಂದ್ರ ನಾಥ್ ಕಡಲತೀರದಲ್ಲಿ ಸಂಭವಿಸಿದ ಬಾಂಬ್ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸಿ ಸಮುದ್ರ ದಡದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ವಿಕಿರಣ ಸೋರಿಕೆಯ ಮುನ್ನೆಚ್ಚರಿಕಾ ಕ್ರಮವಾಗಿ ಹರ್ಟುಗಾ ಗ್ರಾಮದಲ್ಲಿದ್ದವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಯಿತು.

ಯುದ್ದದಂತಹ ತುರ್ತು ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತು ಅರಿವು ಮೂಡಿಸಲು `ಆಪರೇಶನ್ ಅಭ್ಯಾಸ್' ಎಂಬ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಮುಗಿಸಿತು. ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಸೋಮವಾರ ಕಾರವಾರದ ವಿವಿಧ ಭಾಗಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಯಿತು. ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದು ಬಿದ್ದಾಗ ಸ್ಥಳದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಬಗ್ಗೆ, ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡದಿಂದ ರಕ್ಷಣಾ ಕಾರ್ಯಾಚರಣೆ, ಕಾರವಾರದ ರವೀಂದ್ರನಾಥ ಠಾಗೋರ ಬೀಚ್‌ನಲ್ಲಿ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಬಗ್ಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಹರ್ಟುಗಾ ಗ್ರಾಮದಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿನ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮುಗಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್, ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ, ಎನ್.ಡಿ.ಆರ್.ಎಫ್, ಪೊಲೀಸ್, ಕರಾವಳಿ ಪೊಲೀಸ್, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹ ರಕ್ಷಕ ದಳ, ಕಂದಾಯ, ಆರೋಗ್ಯ, ಮೀನುಗಾರಿಕೆ, ನಗರಸಭೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಎನ್.ಎಸ್.ಎಸ್., ಎನ್.ಸಿ.ಸಿ. ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಸಂಜೆ 7.30ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ ನಡೆಸಲಾಗಿದ್ದು, ಈ ಅವಧಿಯಲ್ಲಿ ಸೈರನ್ ಮೊಳಗಿದ ತಕ್ಷಣ ಕಾರವಾರ ನಗರಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಕಿಟಕಿ, ಬಾಗಿಲು ಮುಚ್ಚಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿದರು.

ವಾಹನ ಸವಾರರು ತಾವು ಚಲಾಯಿಸುತ್ತಿದ್ದ ವಾಹನಗಳನ್ನು ಬಂದ್ ಮಾಡಿ ಹೆಡ್ ಲೈಟ್ ಆರಿಸಿ ರಸ್ತೆಯ ಪಕ್ಕದಲ್ಲಿ ಸುರಕ್ಷಿತವಾಗಿ ನಿಂತರು. ಬ್ಲಾಕ್ ಔಟ್ ಕಾರ್ಯಾಚರಣೆಗಾಗಿ ಒಟ್ಟು 13 ಸೈರನ್ ಕೂಗಿದವು.