
ಮೇ 19ರಂದು ಸಿದ್ದಿ ಸಮುದಾಯ ಸಿಎಂ ಭೇಟಿಗೆ
News Details
ಯಲ್ಲಾಪುರ ತಾಲೂಕಿನ ಸಿದ್ದಿ ಸಮುದಾಯದವರು ನಿಯೋಗವೊಂದನ್ನು ರಚಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಮೇ 19ರಂದು ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಸೋಮವಾರ ಯಲ್ಲಾಪುರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸಭೆ ನಡೆದಿದ್ದು, ಸಿದ್ದಿ ಸಮುದಾಯದವರ ಜೊತೆ ರಾಜ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶ್ ಅವರು ಚರ್ಚೆ ನಡೆಸಿದರು. ಸಿದ್ದಿ ಸಮುದಾಯದವರ ಸ್ವ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲು ಅಲ್ಲಿ ಹಾಜರಿದ್ದವರು ಇಚ್ಚಿಸಿದರು. ಕೂಡಲೇ ಜಿ ಎಸ್ ಸಂಗ್ರೇಶ್ ಅವರು ಮುಖ್ಯಮಂತ್ರಿ ಕಚೇರಿಗೆ ಫೋನ್ ಮಾಡಿ, ಸಿದ್ದಿ ಸಮುದಾಯದ ನಿಯೋಗ ಭೇಟಿಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡಿದರು.
ಈ ದಿನ ನಡೆದ ಸಭೆಯಲ್ಲಿ ಸಿದ್ದಿ ಸಮುದಾಯದವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ಸಿದ್ದಿ ಅಭಿವೃದ್ಧಿ ಸಂಘದ ಸದಸ್ಯರು ಸಭೆಯಲ್ಲಿದ್ದು, ಸಮುದಾಯದ ಅಭಿವೃದ್ಧಿ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸುವ ಬಗ್ಗೆ ಮಾತನಾಡಿಕೊಂಡರು. ಹೈಕೋರ್ಟಿನ ನ್ಯಾಯವಾದಿ ಜೈರಾಮ ಸಿದ್ದಿ ಅವರು ವಿವಿಧ ಸಲಹೆ ನೀಡಿದರು. ದೌರ್ಜನ್ಯ ನಿಯಂತ್ರಣ ಕಾಯ್ದೆ ಸಮಿತಿ ಸದಸ್ಯ ಸುರೇಶ ಸಿದ್ದಿ ಸಹ ಪರಿಶಿಷ್ಟ ಸಮುದಾಯದವರ ಸಮಸ್ಯೆಗಳ ಬಗ್ಗೆ ವಿವರಿಸಿದರು.
`ಸಿದ್ದಿ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಲಾಂಪ್ಸ ಸೊಸೈಟಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಿದ್ದಿ ಸಮುದಾಯದವರ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಬೇಕು' ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಸಭೆ ನಿರ್ಧರಿಸಿತು. ಪ್ರಮುಖರಾದ ಬಿಸಗೋಡಿನ ಆನಂದ ಸಿದ್ದಿ, ಮಾಗೋಡಿನ ಮಂಜುನಾಥ ಸಿದ್ದಿ, ಮಂಚಿಕೇರಿಯ ಸುರೇಶ ಸಿದ್ದಿ, ಯಲ್ಲಾಪುರದ ರಾಘವೇಂದ್ರ ಸಿದ್ದಿ ಈ ಸಭೆಯಲ್ಲಿದ್ದರು.