
1ಕ್ಕೆ 80ರೂ ಆಮಿಷ – ವಂಚಕರ ಮೇಲೆ ದಾಳಿ, ಮೂವರು ಬಂಧನ
News Details
1 ರೂಪಾಯಿಗೆ 80ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಂಡೇಲಿಯ ರೋಹಿದಾಸ ರಾಯ್ಕರ್, ಇರ್ಷಾದ್ ಚೌದರಿ ಹಾಗೂ ಹೈದರ್ ಅಲಿ ಈ ದಿನ ಸಿಕ್ಕಿ ಬಿದ್ದಿದ್ದಾರೆ.
ದಾಂಡೇಲಿಯ ಬೈಲಪಾರದ ರೋಹಿದಾಸ ರಾಯ್ಕರ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡಿಮೆ ಸಮಯದಲ್ಲಿ ಅಪಾರ ಹಣಗಳಿಸುವ ದುರುದ್ದೇಶದಿಂದ ಅವರು ಅಡ್ಡದಾರಿ ಹಿಡಿದರು. ದಾಂಡೇಲಿಯ ಪ್ರಭಾರ ಅಧಿಕಾರದಲ್ಲಿರುವ ಹಳಿಯಾಳ ವೃತ್ತ ನಿರೀಕ್ಷಕ ಜಯಪಾಲ ಪಟೇಲ್ ಅವರು ರೋಹಿದಾಸ ರಾಯ್ಕರ್ ನಡೆಸುವ ಅಕ್ರಮವನ್ನು ಕಂಡುಹಿಡಿದರು. ಬೈಲಪಾಲ್ ಚರ್ಚಿನ ಬಳಿ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರು ರೋಹಿದಾಸ ರಾಯ್ಕರ್ ಮೇಲೆ ದಾಳಿ ಮಾಡಿದರು. ಆ ದಿನ ಅವರು ಸಂಗ್ರಹಿಸಿದ್ದ 545ರೂ ಹಣದ ಜೊತೆ ಮಟ್ಕಾ ಸಾಮಗ್ರಿಗಳನ್ನು ವಶಕ್ಕೆಪಡೆದರು.
ಹಳೇ ದಾಂಡೇಲಿಯಲ್ಲಿ ಸೆಂಟ್ರಿAಗ್ ಕೆಲಸ ಮಾಡುವ ಇರ್ಶಾದ್ ಚೌದರಿ ಸಹ ತಮ್ಮ ಕೆಲಸ ಬಿಟ್ಟು ಮಟ್ಕಾ ಆಡಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದರು. ಪಿಎಸ್‌ಐ ಅಮೀನಸಾಬ್ ಅತ್ತಾರ್ ಇರ್ಶಾದ್ ಚೌದರಿಯ ಹೆಡೆಮುರಿ ಕಟ್ಟಿದರು. ಹಳೇ ದಾಂಡೇಲಿಯ ಗಣಪತಿ ದೇವಸ್ತಾನದ ಮುಂದೆ ಮಟ್ಕಾ ಆಡಿಸುವಾಗ ಇರ್ಶಾದ್ ಚೌದರಿ ಸಿಕ್ಕಿಬಿದ್ದರು. ಇರ್ಶಾದ್ ಕಿಸೆಯಲ್ಲಿದ್ದ 485ರೂ ಹಣದ ಜೊತೆ ಮಟ್ಕಾ ಪರಿಕ್ಕರ ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
ಜೊಯಿಡಾದ ಬಾಮಣಗಿಯಲ್ಲಿ ಟ್ರಾವೆಲ್ ಎಜೆಂಟ್ ಆಗಿ ಕೆಲಸ ಮಾಡುವ ಹೈದರ್ ಅಲಿ ಸಹ ಮಟ್ಕಾ ಮೋಹಕ್ಕೆ ಒಳಗಾಗಿದ್ದರು. ಕಮಿಶನ್ ಆಸೆಗಾಗಿ ಹೈದರ್ ಅಲಿ ಸಹ ಅಡ್ಡದಾರಿ ಹಿಡಿದಿದ್ದರು. ಈ ವಿಷಯ ಅರಿತ ವೃತ್ತ ನಿರೀಕ್ಷಕ ಜಯಪಾಲ ಪಟೇಲ್ ಅಲ್ಲಿಯೂ ಬಲೆ ಬೀಸಿದರು. ಬಾಮಣಗಿ ಕ್ರಾಸಿನ ಬಳಿ ಜೂಜಾಟ ನಡೆಸುತ್ತಿದ್ದ ಹೈದರ್ ಅಲಿ ಪೊಲೀಸರ ಬಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 370ರೂ ವಶಕ್ಕೆಪಡೆದ ಪೊಲೀಸರು ಕಠಿಣ ಕ್ರಮ ಅನುಸರಿಸಿದರು.