
ಹೋನ್ನಾವರದ ವೀಳ್ಯದೆಲೆ ಪಾಕಿಸ್ತಾನಕ್ಕೆ ರವಾನೆಗೆ ರೈತರ ವಿರೋಧ
News Details
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳೆಯಲಾಗುವ ವೀಳ್ಯದ ಎಲೆ ಪಾಕಿಸ್ತಾನಕ್ಕೆ ರಪ್ತಾಗುತ್ತಿದ್ದು, ಹೊನ್ನಾವರದ ರೈತರು ಇದೀಗ ಅದಕ್ಕೆ ತಡೆ ಒಡ್ಡಿದ್ದಾರೆ. `ಬಳ್ಳಿಯನ್ನು ಬೇಕಾದರೂ ತುಂಡರಿಸುತ್ತೇವೆ. ಶತ್ರು ರಾಷ್ಟ್ರಕ್ಕೆ ಎಲೆ ಕಳುಹಿಸುವುದಿಲ್ಲ' ಎಂದು ಅಲ್ಲಿನವರು ಪಟ್ಟು ಹಿಡಿದಿದ್ದಾರೆ!
ಕಳೆದ ಅನೇಕ ದಶಕಗಳಿಂದ ಉತ್ತರ ಭಾರತ ಹಾಗೂ ಪಾಕಿಸ್ತಾನದ ಪ್ರದೇಶಗಳಿಗೆ ಹೊನ್ನಾವರದ ಹೊಸಾಕುಳಿಯ ವೀಳ್ಯದೆಲೆಗಳು ರಪ್ತಾಗುತ್ತಿವೆ. ಅಲ್ಲಿನ ಜನ ಇಲ್ಲಿನ ಎಲೆಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿಸುತ್ತಾರೆ. ಅಂಗೈಗಿoತ ಅಗಲ, ದಪ್ಪ ಹಾಗೂ ಖಾರವಾಗಿರುವ ಈ ಎಲೆಗಳ ಮೇಲೆ ಆ ಭಾಗದವರಿಗೆ ವಿಪರೀತ ವ್ಯಾಮೋಹ. ಹೊಸಾಕುಳಿಯ ವೀಳ್ಯದೆಲೆಯ ಸವಿಕಂಡ ಪಾಕಿಸ್ತಾನದವರು ಅಲ್ಲಿಯೂ ಈ ಎಲೆ ಬಳ್ಳಿ ನೆಟ್ಟಿದ್ದಾರೆ. ಆದರೆ, ಇಲ್ಲಿನ ರುಚಿ ಬಂದಿಲ್ಲ. ಹೀಗಾಗಿ ಇಲ್ಲಿನಿಂದಲೇ ಅದನ್ನು ದುಡ್ಡು ಕೊಟ್ಟು ಖರೀದಿಸುತ್ತಾರೆ. `ಹೊಸಾಕುಳಿ ಎಲೆಯೊಂದಿಗೆ ಅಡಿಕೆ, ಸುಣ್ಣ ಸೇರಿಸಿ ವೀಳ್ಯ ಮೆಲ್ಲುವ ಅನುಭವವೇ ವಿಶೇಷ' ಎನ್ನುವುದು ಉತ್ತರ ಭಾರತದ ಪಾನ್‌ವಾಲಗಳ ಮಾತು!
ಇನ್ನೂ ಕಾಶ್ಮೀರದ ಮೇಲೆ ಪಾಕಿಸ್ತಾನದವರು ದಾಳಿ ನಡೆಸಿದ ದಿನದಿಂದಲೇ ಹೊನ್ನಾವರದ ವೀಳ್ಯದೆಲೆ ಬೆಳೆಗಾರರು ಪಾಕಿಸ್ತಾನದ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರಲ್ಲಿಯೂ ಪಾಕಿಸ್ತಾನವನ್ನು ಮಟ್ಟಹಾಕಲು ಭಾರತ ನಾನಾ ತಂತ್ರ ಅನುಸರಿಸುತ್ತಿರುವುದನ್ನು ಅರಿತ ಅಲ್ಲಿನ ಜನ ಹೊನ್ನಾವರದಿಂದ ಪಾಕಿಸ್ತಾನ ಮಾರುಕಟ್ಟೆಗೆ ತಲುಪುತ್ತಿದ್ದ ವೀಳ್ಯದೆಲೆಯ ರಪ್ತನ್ನು ಸ್ಥಗಿತಗೊಳಿಸಿದ್ದಾರೆ. ಮೊದಲು ಹೊನ್ನಾವರದಲ್ಲಿ ಬೆಳೆಯಲಾಗುವ ವೀಳ್ಯದೆಲೆಯನ್ನು ಲಾರಿಗಳ ಮೂಲಕ ರಾಣೆಬೆನ್ನೂರಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಅವು ಭೂಪಾಲ್‌ಗೆ ರೈಲಿನಲ್ಲಿ ಹೋಗಿ, ಮುಂದೆ ವಿಮಾನ ಅಥವಾ ಸಂಜೋತಾ ಎಕ್ಸಪ್ರೆಸ್ ರೈಲಿನ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು. ಸಂಜೋತಾ ರೈಲು ಸ್ಥಗಿತದ ನಂತರ ವೀಳ್ಯದ ಎಲೆಗಳು ಕೊಂಕಣ ರೈಲು ಏರಿ ಮುಂಬೈ ತಲುಪಿದವು. ಅಲ್ಲಿಂದ ವಿಮಾನದ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಿದ್ದವು. ಆದರೆ, ಇದೀಗ ಪಾಕಿಸ್ತಾನದೊಂದಿಗೆ ಅಧಿಕೃತ ವ್ಯಾಪಾರ ನಿಂತಿದೆ. ಅದಾಗಿಯೂ ಮುಂಬೈಯಿನ ದಲ್ಲಾಳಿಗಳು ಕದ್ದು ಮುಚ್ಚಿ ವೀಳ್ಯದೆಲೆಯ ವಹಿವಾಟು ನಡೆಸುತ್ತಿದ್ದಾರೆ. ಇದನ್ನು ಅರಿತ ಹೊನ್ನಾವರದ ರೈತರು ಮುಂಬೈ ಮಾರುಕಟ್ಟೆಗೆ ವೀಳ್ಯದೆಲೆ ಕಳುಹಿಸದಿರಲು ನಿರ್ಧರಿಸಿದ್ದಾರೆ!
ನಷ್ಟವಾದರೂ ಚಿಂತೆ ಇಲ್ಲ!
ಪಾಕಿಸ್ತಾನದಲ್ಲಿ ಒಂದು ಎಲೆಗೆ 5-6ರೂ ದರವಿದೆ. ಆದರೆ, ಇಲ್ಲಿನ ರೈತರಿಗೆ ಸರಾಸರಿ 50 ಪೈಸೆ ಸಿಗುತ್ತದೆ. 100 ಎಲೆಗಳ ಒಂದು ಕಟ್ಟಿಗೆ 50-60 ರೂ ದರದಲ್ಲಿ ದಲ್ಲಾಳಿಗಳು ಖರೀದಿಸುತ್ತಾರೆ. ಸದ್ಯ ಪಾಕಿಸ್ತಾನಕ್ಕೆ ಎಲೆ ರಪ್ತಾಗುವುದು ನಿಂತ ನಂತರ ಒಂದು ಕಟ್ಟಿಗೆ 20-30ರೂ ದರದಲ್ಲಿ ವೀಳ್ಯದ ಎಲೆ ಮಾರಾಟವಾಗುತ್ತಿದೆ. ಅದಾಗಿಯೂ ಪಾಕಿಸ್ತಾನಕ್ಕೆ ಎಲೆ ಕೊಡಲ್ಲ ಎಂಬುದು ಬೆಳೆಗಾರರ ಮಾತು.
ಹೊನ್ನಾವರ ತಾಲೂಕಿನಿಂದ ವೀಳ್ಯದೆಲೆಯನ್ನು ಹುಬ್ಬಳ್ಳಿ, ಮುಂಬೈ ಮತ್ತು ಭೋಪಾಲ್ ಏಜೆಂಟರಿಗೆ ಸತೀಶ ಭಟ್ ಆರೋಳ್ಳಿ ಕಳುಹಿಸುತ್ತಾರೆ. ಗೋವಿಂದ ಭಟ್ ಮುಗ್ವಾ, ಎಸ್ ಐ ಹೆಗಡೆ ವಿಲಾಯತಿ ಸಹ ಈ ವ್ಯಾಪಾರದಲ್ಲಿದ್ದಾರೆ. ಇದೀಗ ಅವರು ಸಹ `ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಮಾತ್ರ ಕಳುಹಿಸುವುದಿಲ್ಲ' ಎಂದು ಹೇಳಿದ್ದಾರೆ.