
ಪಾಕಿಸ್ತಾನಿ ಪ್ರಜೆ ಹಡಗಿನ ಮೂಲಕ ಕಾರವಾರ ಪ್ರವೇಶ, ಅನುಮತಿ ಇಲ್ಲದೆ ಸಮುದ್ರದಲ್ಲಿ ಸಂಚರಿಸುತ್ತಿರುವವರು ತೊಲಗುವ ಸಿದ್ಧತೆ
News Details
ಪಾಕಿಸ್ತಾನದ ಪ್ರಜೆಯೊಬ್ಬರು ಹಡಗಿನ ಮೂಲಕ ಕಾರವಾರ ಪ್ರವೇಶಿಸಿದ್ದು, ಈ ನೆಲದ ಮೇಲೆ ಕಾಲಿಡಲು ಅವರಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸಮುದ್ರದಲ್ಲಿಯೇ ಸಂಚರಿಸುತ್ತಿರುವ ಅವರು ಕಾರವಾರ ಬಿಟ್ಟು ತೊಲಗುವ ಸಿದ್ಧತೆ ನಡೆಸಿದ್ದಾರೆ!
ಕಾರವಾರದ ವಾಣಿಜ್ಯ ಬಂದರಿಗೆ ಸೋಮವಾರ ಎಂ ಟಿ ಆರ್ ಓಶಿಯನ್ ಎಂಬ ಹಡಗು ಆಗಮಿಸಿತ್ತು. ಬಿಟಮಿನ್ ತುಂಬಿದ ಈ ಹಡಗು ಇರಾನ್ ದೇಶದಿಂದ ಹೊರಟಿದ್ದರೂ ಅದರಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬರು ಇದ್ದರು. ಜೊತೆಗೆ ಭಾರತದ 12, ಸಿರಿಯಾದ ಇಬ್ಬರು ಸಿಬ್ಬಂದಿ ಹಡಗಿನಲ್ಲಿ ಕೆಲಸಕ್ಕಿದ್ದರು. ಹಡಗು ಬಂದ ನಂತರ ಅಲ್ಲಿನ ಸಿಬ್ಬಂದಿ ಬಗ್ಗೆ ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಭದ್ರತಾ ಎಜನ್ಸಿಯವರು ವಿಚಾರಣೆ ನಡೆಸಿದರು. ಆಗ, ಪಾಕಿಸ್ತಾನದ ಒಬ್ಬ ಸಿಬ್ಬಂದಿ ಅಲ್ಲಿರುವುದು ಖಚಿತವಾಯಿತು.
ಪಾಕಿಸ್ತಾನದ ಪ್ರಜೆಯನ್ನು ಕಾರವಾರದ ನೆಲ ಸ್ಪರ್ಶಿಸಲು ಅಧಿಕಾರಿಗಳು ಬಿಡಲಿಲ್ಲ. ಜೊತೆಗೆ ಪಾಕಿಸ್ತಾನಿ ಪ್ರಜೆಯ ಮೊಬೈಲನ್ನು ವಶಕ್ಕೆಪಡೆಯುವಂತೆ ಅಧಿಕಾರಿಗಳು ಹಡಗಿನ ಕ್ಯಾಪ್ಟನಿಗೆ ಸೂಚನೆ ನೀಡಿದರು. ಮೊಬೈಲಿನಲ್ಲಿ ಇಲ್ಲಿನ ಫೋಟೋ-ಮಾಹಿತಿ ಹಂಚಿಕೊಳ್ಳುವ ಆತಂಕದ ಹಿನ್ನಲೆ ಹಡಗು ಕಾರವಾರ ಬಿಟ್ಟು ಹೊರ ಹೋದ ನಂತರವೇ ಅದನ್ನು ಮರಳಿಸಲು ಸೂಚನೆಯನ್ನು ನೀಡಿದರು.
ಇನ್ನೂ, ಭಾರತ-ಪಾಕಿಸ್ತಾನದ ಕದನದ ನಂತರ ಕಾರವಾರಕ್ಕೆ ಎರಡು ವಿದೇಶಿ ಹಡಗು ಬಂದಿದ್ದು, ಈ ಅವಧಿಯಲ್ಲಿ ಪಾಕಿಸ್ತಾನದ ಪ್ರಜೆಯನ್ನು ತಂದ ಹಡಗು ಬಂದಿದ್ದು ಇದೇ ಮೊದಲು. ಬಿಣಗಾದ ಗ್ರಾಸಿಂ ಘಟಕಕ್ಕೆ ಅಗತ್ಯವಿರುವ ಸರಕು ತಂದಿದ್ದ ಇನ್ನೊಂದು ಹಡಗಿನಲ್ಲಿ ಇಂಡೋನೇಶಿಯಾ, ಮಯನ್ಮಾರ್ ಹಾಗೂ ಕೋರಿಯಾದ ಪ್ರಜೆಗಳಿದ್ದರು.
ಇನ್ನೂ ಮಂಗಳವಾರ ಪಾಕಿಸ್ತಾನಿ ಪ್ರಜೆಯಿದ್ದ ಹಡಗು ಹೊರಡುವ ಸಿದ್ಧತೆ ನಡೆಸಿದೆ. ಅಗತ್ಯ ಕಾಗದಪತ್ರಗಳು ಸಿದ್ಧವಾಗುತ್ತಿದೆ. ಬುಧವಾರ ಕಾರವಾರ ಬಂದರು ವ್ಯಾಪ್ತಿಯಿಂದ ಸಂಪೂರ್ಣವಾಗಿ ಈ ಹಡಗು ಹೊರ ಹೋಗಲಿದೆ. ಇದರೊಂದಿಗೆ ಪಾಕಿಸ್ತಾನಿ ಪ್ರಜೆಯೂ ಹಡಗಿನ ಜೊತೆ ಈ ದೇಶ ಬಿಟ್ಟು ಹೋಗಲಿದ್ದಾರೆ. ಸದ್ಯ ಪಾಕಿಸ್ತಾನಿ ಪ್ರಜೆಗೆ ಅಗತ್ಯವಿರುವ ಊಟೋಪಚಾರದ ವ್ಯವಸ್ಥೆಯನ್ನು ಹಡಗಿನ ಸಿಬ್ಬಂದಿ ಸಮುದ್ರದ ನಡುವೆಯೇ ಮಾಡಿದ್ದಾರೆ.