
7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆಯವರಿಗೆ ಸನ್ಮಾನ.
News Details
ಉತ್ತರ ಕನ್ನಡ : ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಲಿರುವ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಗುರುವಾರ ಮಕ್ಕಳ ಜೊತೆ ಕಾಲ ಕಳೆದರು. ಶಾಲೆಯ ಕೆಲ ಮಕ್ಕಳನ್ನು ಮಾತನಾಡಿಸಿ ಶೈಕ್ಷಣಿಕ ಗುಣಮಟ್ಟ ಅಳೆದರು. ಅದಾದ ನಂತರ ಸವಣಗೇರಿ ಶಾಲೆಯಲ್ಲಿಯೇ ಅವರು ಮಕ್ಕಳ ಜೊತೆ ಊಟ ಮಾಡಿದರು. ಶಿಕ್ಷಣಾಧಿಕಾರಿ ಆಗಮನದಿಂದ ಸಂತಸಗೊ0ಡ ಸವಣಗೇರಿ ಶಾಲಾ ಆಡಳಿತ ಮಂಡಳಿಯವರು ವಿಶೇಷ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು. ಪುರಿ-ಬಾಜಿ-ಪಾಯಸ ಸೇರಿ ಬಗೆ ಬಗೆಯ ಪದಾರ್ಥಗಳನ್ನು ಬಡಿಸಿದರು. ಮಧ್ಯಾಹ್ನ ಸವಣಗೇರಿ ಶಾಲೆಯಲ್ಲಿ `ಪಾನಿಪುರಿ ಹಬ್ಬ' ಆಯೋಜಿಸಲಾಗಿದ್ದು, ಈ ಹಬ್ಬದಲ್ಲಿಯೂ ಮಕ್ಕಳು ಖುಷಿಯಿಂದ ಭಾಗವಹಿಸಿದರು. ಯಲ್ಲಾಪುರದ ಸವಣಗೇರಿ ಶಾಲೆಯಲ್ಲಿ ಕಲಿತ 7ನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡುವುದಕ್ಕಾಗಿ ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ಕಾರ್ಯಕ್ರಮ ಆಯೋಜಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರನ್ನು ಶಿಕ್ಷಕರೆಲ್ಲರೂ ಸೇರಿ ಸನ್ಮಾನಿಸಿದರು. 7ನೇ ತರಗತಿಯ ಐದು ವಿದ್ಯಾರ್ಥಿಗಳು ಸೇರಿ ಈ ವೇಳೆ ಶಾಲೆಗೆ ಕಪಾಟನ್ನು ಉಡುಗರೆಯಾಗಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ `ಸರ್ಕಾರಿ ಶಾಲೆ ಉಳಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದರೂ ಸವಣಗೇರಿಯಂಥ ಶಾಲೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಯಲ್ಲಾಪುರದ 96 ಶಾಲೆಗಳಲ್ಲಿ ಸದ್ಯ ಇಂಗ್ಲೀಷ್ ಕಲಿಕೆ ಶುರುವಾಗಿದ್ದು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ' ಎಂದು ಅಭಿಪ್ರಾಯಪಟ್ಟರು. `ಶಿಕ್ಷಕನ ಮಗನಾಗಿರುವ ನಾನು ಸರ್ಕಾರಿ ಶಾಲೆಯಲ್ಲಿ ಕಲಿತು ಶಿಕ್ಷಣಾಧಿಕಾರಿಯಾಗಿದ್ದೇನೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಶಾಲೆ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ' ಎಂದು ಅವರು ಹೇಳಿದರು.