Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-15

ಅಘನಾಶಿನಿ ನದಿಯಲ್ಲಿ ದೇವರ ಹುಡುಕಾಟ ನಡೆಸುತ್ತಿರುವ ಈಶ್ವರ ಮಲ್ಪೆ

News Details

ಕುಮಟಾ ಮೂರೂರು ಬೊಗ್ರಿಬೈಲ್‌ನ ಅಘನಾಶಿನಿ ನದಿ ಆಳದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ದೇವರ ಹುಡುಕಾಟ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ಶೋಧ ನಡೆಸಿದರೂ ದೇವರು ಸಿಕ್ಕಿಲ್ಲ. ಅದಾಗಿಯೂ ಅವರು ಹುಡುಕಾಟ ನಿಲ್ಲಿಸಿಲ್ಲ!

800 ವರ್ಷಗಳ ಐತಿಹ್ಯ ಹೊಂದಿದ ನಂದಿಕೇಶ್ವರ ದೇವಾಲಯದ ಅವಶೇಷಗಳಿಗಾಗಿ ಈಶ್ವರ ಮಲ್ಪೆ ಹುಡುಕಾಟ ನಡೆದಿದೆ. ದೇವಾಲಯ ಆಡಳಿತ ಮಂಡಳಿಯವರು ಅಷ್ಟಮಂಗಲ ಪ್ರಶ್ನೆ ಕೇಳಿದಾಗ ದೇವರ ಮೂರ್ತಿ ಮಣ್ಣಿನಲ್ಲಿ ಹೂತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆ ಮೂರ್ತಿಗಾಗಿ ಶೋಧ ನಡೆಯುತ್ತಿದೆ.

`300 ವರ್ಷಗಳ ಹಿಂದೆ ಈ ಭಾಗದ ಉಪ್ಪಿನಪಟ್ಟಣ ಪ್ರಸಿದ್ಧ ಬಂದರು ಆಗಿತ್ತು. ಉಪ್ಪು ಸಾಗಾಣಿಕೆ ಮೂಲಕ ಈ ಬಂದರು ಪ್ರಸಿದ್ಧಿ ಪಡೆದಿತ್ತು. ಈ ದೇವಾಲಯದಲ್ಲಿ ವಾಸವಾಗಿದ್ದ ಬಸವ ಉಪ್ಪು ತಿನ್ನಲು ಬಂದರಿಗೆ ಹೋದಾಗ ಗುಂಡಿನ ಏಟು ತಗುಲಿತು. ಆ ವೇಳೆ ಉಪ್ಪಿನಪಟ್ಟಣದಿಂದ ದೇವಾಲಯದವರೆಗೂ ರಕ್ತ ಕಲೆಗಳು ಮೂಡಿದ್ದವು. ಇದರ ಜೊತೆಗೆ ದೇವಾಲಯದಲ್ಲಿದ್ದ ಶಿಲಾಮಯ ನಂದಿಯ ಕಾಲಿಗೆ ಹಾನಿಯಾಗಿತ್ತು. ಭಿನ್ನಗೊಂಡ ನಂದಿಯ ಮೂರ್ತಿಯನ್ನು ಜನ ಮೂಲಗದ್ದೆಯ ಅಘನಾಶಿನಿ ತಟದಲ್ಲಿ ಬಿಟ್ಟಿದ್ದರು. ಆ ಮೂರ್ತಿಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ' ಎಂದು ಅಲ್ಲಿನವರು ವಿವರಿಸಿದರು.

ಆ ಕಾಲದಿಂದ ಈಗಿನವರೆಗೂ ದೇವಾಲಯದಲ್ಲಿ ಪೂಜೆ-ಪುನಸ್ಕಾರ ನಡೆಯುತ್ತ ಬಂದಿದೆ. ದೇವಾಲಯದ ಅಷ್ಟಬಂಧ ಕಾರ್ಯಕ್ರಮದಲ್ಲಿ ಅಷ್ಠಮಂಗಲ ಪ್ರಶ್ನಾವಳಿ ಹಾಕಿದಾಗ ದೇವಾಲಯದ ಮೂಲ ನಂದಿಯಲ್ಲಿ ಇನ್ನು ಚೈತನ್ಯವಿರುವುದು ಗೊತ್ತಾಗಿದೆ. ಹೀಗಾಗಿ ಆ ನಂದಿಯ ಹುಡುಕಿಕೊಡುವಂತೆ ದೇಗುಲ ಸಮಿತಿಯವರು ಈಶ್ವರ ಮಲ್ಪೆ ಅವರಿಗೆ ಫೋನಾಯಿಸಿದ್ದಾರೆ. ಹೀಗಾಗಿ ಈಶ್ವರ ಮಲ್ಪೆ ಅವರು ನದಿ ಆಳದಲ್ಲಿ ಶೋಧ ನಡೆಸಿದ್ದಾರೆ.

ಸದ್ಯ ಈಶ್ವರ ಮಲ್ಪೆ ಅವರು ಇನ್ನೊಂದು ಕಾರ್ಯಾಚರಣೆಗಾಗಿ ಭದ್ರಾವತಿಗೆ ತೆರಳಿದ್ದಾರೆ. ಮೇ 22ರ ನಂತರ ಮತ್ತೆ ಕುಮಟಾಗೆ ಬಂದು ಮೂರ್ತಿ ಶೋಧ ನಡೆಸಲಿದ್ದಾರೆ. `300 ವರ್ಷಗಳ ಹಿಂದೆ ನೀರಿಗೆ ಬಿಟ್ಟ ಮೂರ್ತಿ ಈಗ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಅದಾಗಿಯೂ ನದಿ ಆಳದ ಮಣ್ಣಿನಲ್ಲಿ ಶೋಧ ಕಾರ್ಯ ನಡೆದಿದೆ' ಎಂದು ಈಶ್ವರ ಮಲ್ಪೆ ಅವರು ಪ್ರತಿಕ್ರಿಯಿಸಿದ್ದಾರೆ.