
ಮಾಹಿತಿ ಹಕ್ಕು ಕಾಯ್ದೆ ಸೆರೆ: ಮಂಕಾಳು ವೈದ್ಯರಿಗೆ ತಲೆನೋವು
News Details
ಪಾರದರ್ಶಕ ಆಡಳಿತ ಜಾರಿಗಾಗಿ ಜನಪ್ರತಿನಿಧಿಗಳು ಜಾರಿ ಮಾಡಿದ ಮಾಹಿತಿ ಹಕ್ಕು ಕಾಯ್ದೆ ಇದೀಗ ಜನಪ್ರತಿನಿಧಿಗಳಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರನ್ನು ಈ ಕಾಯ್ದೆ ಸುತ್ತುವರೆದಿದ್ದು, ಇದರಿಂದ ಅವರು ಸುಸ್ತಾಗಿದ್ದಾರೆ!
ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಬೆನ್ನತ್ತಿದ್ದಾರೆ. ಮಂಕಾಳು ವೈದ್ಯ ಅವರ ಮುಂದಾಳತ್ವದಲ್ಲಿ ನಡೆದ ಮೀನು ಮೇಳ, ಮಂಕಾಳು ವೈದ್ಯ ಅವರ ಒಡೆತನದ ಶಾಲೆ ಹಾಗೂ ಅರಣ್ಯ ಅತಿಕ್ರಮಣ, ಆಸ್ಪತ್ರೆಯಲ್ಲಿನ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದ ಸ್ವತಃ ಮಂಕಾಳು ವೈದ್ಯರೇ ತಬ್ಬಿಬ್ಬಾಗಿದ್ದು, ಮಾಹಿತಿ ಹಕ್ಕು ಬಳಕೆದಾರರ ವಿರುದ್ಧ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.
ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗವನ್ನು ಸಚಿವರು ಅತಿಕ್ರಮಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ದೂರಿದ್ದಾರೆ. ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ನಡೆದಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿ ಪಡೆದ ದಾಖಲೆಗಳ ಜೊತೆ ಹೋರಾಟಗಾರರು ರಾಜ್ಯಪಾಲರಿಗೆ ಸಹ ದೂರು ನೀಡಿದ್ದಾರೆ. ಇದರಿಂದ ಮಂಕಾಳು ವೈದ್ಯ ಅವರು ಸಿಡಿಮಿಡಿಗೊಂಡಿದ್ದಾರೆ.
ಮoಕಾಳು ವೈದ್ಯರ ಮುಂದಾಳತ್ವದಲ್ಲಿ ನಡೆದ ಮತ್ಸ್ಯಮೇಳದ ಹಣಕಾಸು ವಿಷಯದಲ್ಲಿನ ಲೋಪವೂ ಮಾಹಿತಿ ಹಕ್ಕು ಕಾಯ್ದೆಯಿಂದ ಅನಾವರಣಗೊಂಡಿದೆ. ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೇ ಮೀನು ಮೇಳಕ್ಕಾಗಿ 9.85 ಕೋಟಿ ರೂ ವೆಚ್ಚ ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದರಿಂದಲೂ ಮಂಕಾಳು ವೈದ್ಯ ಅವರು ಬೇಸರಿಸಿಕೊಂಡಿದ್ದಾರೆ.
ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ಬಿಪಿಎಲ್ ಕಾರ್ಡದಾರರಿಗೆ ಆದ ಅನ್ಯಾಯದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವ್ಯಕ್ತಿಯೊಬ್ಬರು ದಾಖಲೆ ಬಯಸಿದ್ದಾರೆ. ಇದಕ್ಕಾಗಿ ಅರ್ಜಿದಾರರು ಜರಾಕ್ಸ ವೆಚ್ಚ ಎಂದು 16 ಸಾವಿರ ರೂ ಪಾವತಿಸಲು ಸಿದ್ಧರಾಗಿದ್ದಾರೆ. ಇಲ್ಲಿನ ಅನ್ಯಾಯದ ವಿಷಯ ಸಹ ಉಸ್ತುವಾರಿ ಸಚಿವರನ್ನು ಸುತ್ತುವರೆಯುವ ಸಾಧ್ಯತೆಯಿರುವುದರಿಂದ ಮಂಕಾಳು ವೈದ್ಯರ ತಲೆಬಿಸಿ ಹೆಚ್ಚಾಗಿದೆ.
ಈ ಎಲ್ಲಾ ಹಿನ್ನಲೆ ಮಂಕಾಳು ವೈದ್ಯ ಅವರು `ಮಾಹತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಕೆಲವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ' ಎಂಬ ಹೇಳಿಕೆ ನೀಡಿದ್ದಾರೆ. `ಹಣಕಾಸು ವಿಷಯ, ವರ್ಗಾವಣೆ ಪಟ್ಟಿ, ಟೆಂಡರ್ ಮಾಹಿತಿ ಸೇರಿ ಎಲ್ಲಾ ದಾಖಲೆಗಳನ್ನು ಸರ್ಕಾರ ತನ್ನ ವೆಬ್‌ಸೈಟಿನಲ್ಲಿ ಪಾರದರ್ಶಕವಾಗಿ ಪ್ರದರ್ಶಿಸಿದರೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವ ಅಗತ್ಯವೇ ಬರುವುದಿಲ್ಲ. ದಾಖಲೆಗಳನ್ನು ಬಚ್ಚಿಡಲು ಪ್ರಯತ್ನಿಸಿದಾಗ ಮಾತ್ರ ಅರ್ಜಿದಾರರು ದಾಖಲೆಗಳಿಗಾಗಿ ಅಲೆದಾಡಬೇಕಾಗುತ್ತದೆ' ಎಂಬುದು ಮಾಹಿತಿ ಹಕ್ಕು ಬಳಕೆದಾರರ ಅಭಿಪ್ರಾಯ.