
ಅಭಿವೃದ್ಧಿ ಕೆಲಸಗಳಿಗೆ ಸಯ್ಯದ್ ಕೈಸರ್ ಸನ್ಮಾನ
News Details
ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸಯ್ಯದ್ ಕೈಸರ್ ಅವರ ಅಭಿವೃದ್ಧಿ ಕೆಲಸಗಳನ್ನು ಪಟ್ಟಣ ಪಂಚಾಯತ ಗುರುತಿಸಿದೆ. ಹೀಗಾಗಿ ಪ ಪಂ ಸಾಮಾನ್ಯ ಸಭೆಯಲ್ಲಿ ಸಯ್ಯದ ಕೈಸರ್ ಅವರನ್ನು ಗೌರವಿಸಲಾಗಿದೆ.
ಸಯ್ಯದ ಕೈಸರ್ ಅವರು ಯಲ್ಲಾಪುರ ಪಟ್ಟಣದ ವಲಿಶಾಗಲ್ಲಿ, ಗೋಪಾಲಕೃಷ್ಣ ಗಲ್ಲಿ, ಚರ್ಚ ರಸ್ತೆ, ಮಹಿಳಾ ಮಂಡಳ ರಸ್ತೆ ಸೇರಿ ವಿವಿಧ ಪ್ರದೇಶಗಳ ಪ್ರತಿನಿಧಿಯಾಗಿದ್ದಾರೆ. ತಮ್ಮ ವಾರ್ಡಿನಲ್ಲಿ ಇಕ್ಕಟ್ಟಾಗಿರುವ ರಸ್ತೆ ಸಮಸ್ಯೆ ಬಗ್ಗೆ ಗಮನಿಸಿದ ಅವರು ರಸ್ತೆ ಅಗಲೀಕರಣಕ್ಕೆ ಆಸಕ್ತಿ ತೋರಿದರು. ರಸ್ತೆ ಚರಂಡಿ ಇಲ್ಲದಿರುವುದನ್ನು ನೋಡಿ ಸೂಕ್ತ ಚರಂಡಿ ನಿರ್ಮಿಸಿದರು. ಚರಂಡಿಗೆ ಸ್ಲಾಪ್ ಅಳವಡಿಸುವ ಮೂಲಕ ಅಪಾರ ಪ್ರಮಾಣದ ಸೊಳ್ಳೆ ಕಾಟದಿಂದ ಆ ಭಾಗದ ಜನರನ್ನು ರಕ್ಷಿಸಿದರು. ರಾತ್ರಿ ಬೀದಿ ದೀಪ ಬೆಳಗುತ್ತಿಲ್ಲ ಎಂಬ ದೂರು ಆಲಿಸಿ, ಪ್ರತಿ ಕಂಬಕ್ಕೂ ಎಲ್‌ಇಡಿ ದೀಪ ಅಳವಡಿಸಿದರು. ಸರ್ಕಾರಿ ಬಾವಿಗಳಲ್ಲಿ ಹೂಳು ತುಂಬಿರುವ ವಿಷಯ ಅರಿತು ಹೂಳು ತೆಗೆಸಿದರು. ಪ್ರಮುಖ ಕಡೆ ಬೋರ್‌ವೆಲ್ ತೆಗೆಸುವುದರ ಜೊತೆ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದರು.
ಆ ಮೂಲಕ ತಾವು ಪ್ರತಿನಿಧಿಸುವ ಕ್ಷೇತ್ರದ ಹಲವು ಬಗೆಯ ಸಮಸ್ಯೆಗಳನ್ನು ಸಯ್ಯದ ಕೈಸರ್ ಅವರು ಬಗೆಹರಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ಬೀದಿ ದೀಪ ಇಲ್ಲದಿರುವಿಕೆ, ಇಕ್ಕಟ್ಟಾದ ರಸ್ತೆಯಿಂದ ಜನ ಅನುಭವಿಸುತ್ತಿದ್ದ ನೋವನ್ನು ದೂರ ಮಾಡಿದಕ್ಕಾಗಿ ಪಟ್ಟಣ ಪಂಚಾಯತದ ಇತರೆ ಸದಸ್ಯರು ಅವರನ್ನು ಅಭಿನಂದಿಸಿದ್ದಾರೆ. ಮೊದಲ ಬಾರಿ ಪ ಪಂ ಚುನಾವಣೆ ಎದುರಿಸಿದ ಸಯ್ಯದ ಕೈಸರ್ ಅವರು ಮೊದಲ ಬಾರಿಗೆ ಪಟ್ಟಣ ಪಂಚಾಯತ ಸದಸ್ಯ ಸ್ಥಾನ ಪಡೆದಿದ್ದು, ಮೊದಲ ಅವಧಿಯಲ್ಲಿಯೇ ಈ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದದನ್ನು ಜನ ಮೆಚ್ಚಿದ್ದಾರೆ.
ಈ ಹಿನ್ನಲೆ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ನರ್ಮದಾ ನಾಯ್ಕ ಅವರು ಸರ್ವ ಸದಸ್ಯರ ಜೊತೆ ಸಯ್ಯದ್ ಕೈಸರ್ ಅವರನ್ನು ಗೌರವಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿದವರಿಗೆ ಸಯ್ಯದ್ ಕೈಸರ್ ಸಹ ಕೃತಜ್ಞತೆ ಸಲ್ಲಿಸಿದರು.