
ಉಪರಾಷ್ಟ್ರಪತಿ ಭೇಟಿಗೆ ಸ್ವಾಗತ ಅವಕಾಶವಿಲ್ಲದ ನಗರಸಭೆ ಅಧ್ಯಕ್ಷೆಗೂ ಅಸಮಾಧಾನ
News Details
ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರು ಉಪರಾಷ್ಟ್ರಪತಿಗಳನ್ನು ಸ್ವಾಗತಿಸಬೇಕಿತ್ತು. ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ!
ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ಉತ್ತರ ಕನ್ನಡ ಜಿಲ್ಲಾಡಳಿತ ಮೊದಲು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರಿಗೆ `ಗಣ್ಯರ ಸ್ವಾಗತ'ದ ಜವಾಬ್ದಾರಿ ನೀಡಿತ್ತು. ಅದಾದ ನಂತರ ನಗರಸಭೆ ಅಧ್ಯಕ್ಷರಿಗೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಫೋನ್ ಮಾಡಿ `ನೀವು ಅಲ್ಲಿ ಬಂದರೆ ಸರಿಯಾಗುವುದಿಲ್ಲ. ಹೀಗಾಗಿ ನೀವು ಬರುವುದು ಬೇಡ' ಎಂದಿದ್ದರು!
ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ ನಗರಸಭೆಗೆ ಅವಮಾನ ಮಾಡಿರುವುದು ಇದೇ ಮೊದಲಲ್ಲ. ಕದಂಬ ಉತ್ಸವದ ಅವಧಿಯಲ್ಲಿ ಸಹ ಜಿಲ್ಲಾಡಳಿತ ನಗರಸಭೆ ಸದಸ್ಯರಿಂದ ಅಂತರ ಕಾದುಕೊಂಡಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಸಹ ನಗರಸಭೆ ಸಹಕಾರದ ಬಗ್ಗೆ ನಮೂದಿಸಿರಲಿಲ್ಲ. ಕದಂಬ ಉತ್ಸವಕ್ಕೂ ನಗರಸಭೆಯವರನ್ನು ಆಮಂತ್ರಿಸಿರಲಿಲ್ಲ. ಆ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದರೂ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅಧಿಕಾರಿಗಳು ಸಹ ಜನಪ್ರತಿನಿಧಿಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಲಿಲ್ಲ.
ಸರ್ಕಾರಿ ಕಾರ್ಯಕ್ರಮಗಳಿಗೆ ಆಮಂತ್ರಿಸದೇ ಇರುವುದು, ಶಿಷ್ಟಾಚಾರ ಪಾಲನೆಯಲ್ಲಿನ ಲೋಪ, ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸದಿರುವುದು ಸೇರಿ ಹಲವು ಬಗೆಯ ಆರೋಪಗಳು ಮೊದಲಿನಿಂದಲೂ ಇದೆ. ಇದೀಗ ನಗರದ ಪ್ರಥಮ ಪ್ರಜೆ ಎಂದು ಬಣ್ಣಿಸಲ್ಪಡುವ ನಗರಸಭೆ ಅಧ್ಯಕ್ಷರಿಗೆ ಅಧಿಕಾರಿಗಳು ಅವಮಾನ ಮಾಡಿದ ಬಗ್ಗೆ ನಗರಸಭೆ ಸದಸ್ಯರು ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ ನಗರಸಭೆ ಅಧ್ಯಕ್ಷರಿಗೆ ಅವಮಾನ ಮಾಡಿರುವ ಬಗ್ಗೆ ಚರ್ಚೆ ನಡೆದಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿಯೇ ಸದಸ್ಯರು ಉಪವಿಭಾಗಾಧಿಕಾರಿ ಕಾವ್ಯರಾಣಿ ವಿರುದ್ಧ ಸಿಡಿದೆದ್ದಿದ್ದಾರೆ.
ನಗರಸಭೆಗೆ ಆದ ಅವಮಾನದ ಬಗ್ಗೆ ನಗರಸಭೆ ಸದಸ್ಯ ಶ್ರೀಕಾಂತ ತಾರಿಬಾಗಿಲು ಆಕ್ಷೇಪಿಸಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಯಾಗಿ ನಗರಸಭೆ ಅಧ್ಯಕ್ಷ ಶರ್ಮಿಳಾ ಮಾದನಗೇರಿ ಅವರು `ಆ ದಿನ' ನಡೆದ ಘಟನಾವಳಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. `ನಮಗೆ ಅವಕಾಶ ಕೊಡಿ ಎಂದು ಯಾರೂ ಕೇಳಿರಲಿಲ್ಲ. ಉಪವಿಭಾಗಾಧಿಕಾರಿ ಕಚೇರಿಯಿಂದಲೇ ಸ್ವಾಗತದ ಜವಾಬ್ದಾರಿ ನೀಡಿ, ನಂತರ ಕಸಿದುಕೊಳ್ಳಲಾಗಿದೆ. ನಿಮಗೆ ತಪ್ಪಾಗಿ ಆಮಂತ್ರಣ ನೀಡಲಾಗಿದೆ. ನೀವು ಅಲ್ಲಿ ಬರುವುದು ಬೇಡ' ಎಂದು ಉಪವಿಭಾಗಾಧಿಕಾರಿಗಳು ಫೋನ್ ಮಾಡಿ ಹೇಳಿದ್ದರು' ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರು ಸದಸ್ಯರ ಮುಂದೆ ನೋವು ತೋಡಿಕೊಂಡಿದ್ದಾರೆ.
`ಜನಪ್ರತಿನಿಧಿಗಳಿಗೆ ಗೌರವ ನೀಡುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಆದರೂ, ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರ ಜಿಲ್ಲೆಯಲ್ಲಿಯೇ ಜನಪ್ರತಿನಿಧಿಗಳಿಗೆ ಪದೇ ಪದೇ ಅವಮಾನವಾಗುತ್ತಿರುವುದು ಬೇಸರದ ಸಂಗತಿ' ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು. ಉಪವಿಭಾಗಾಧಿಕಾರಿಯಿಂದ ಆದ ಲೋಪದ ಬಗ್ಗೆ ಸಂಸದರು ಹಾಗೂ ಶಾಸಕರ ಗಮನಕ್ಕೆ ತರಲು ನಗರಸಭೆಯವರು ನಿರ್ಧರಿಸಿದರು.