Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
21:33:00 2025-04-03

ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

News Details

ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರಿ ಆರೋಪಿ ಅಸ್ಲಾಂ'ಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. 'ಅಕ್ರಮ ಸರಾಯಿ ಹಾಗೂ ಗಾಂಜಾ ನಶೆಯಲ್ಲಿ ಹೇಯಕೃತ್ಯ ನಡೆದಿದ್ದು, ಅಕ್ರಮ ಚಟುವಟಿಕೆಯನ್ನು ಮೊದಲು ತಡೆಯಿರಿ' ಎಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಒತ್ತಾಯಿಸಿದ್ದಾರೆ.

ಕಿರವತ್ತಿಯ ಪೊಲೀಸ್ ಹೊರಠಾಣೆ ಬಳಿ ಜಮಾಯಿಸಿದ ಜನ ತಮ್ಮೊಳಗಿನ ಆಕ್ರೋಶವನ್ನು ಹೊರ ಹಾಕಿದರು.‌ 'ಪುಟ್ಟ ಬಾಲಕಿಯ ಬದುಕು ಹಾಳು ಮಾಡಿದ ಪಾಪಿಯನ್ನು ಗಲ್ಲಿಗೆ ಏರಿಸಬೇಕು' ಎಂದು ಆಗ್ರಹಿಸಿದರು. ಸಂತ್ರಸ್ತ ಬಾಲಕಿ ಕುಟುಂಬದವರು ಸಹ ಆಗಮಿಸಿ ಕಣ್ಣೀರು ಹಾಕಿದರು.

'ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ. ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ' ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಆಗ್ರಹಿಸಿದರು. 'ಸಂತ್ರಸ್ತ ಬಾಲಕಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಬಾಲಕಿಯ ಆರೋಗ್ಯ ಸ್ಥಿತಿಯ ಬಗ್ಗೆ ದಿನಕ್ಕೆ ಎರಡು ಬಾರಿ ಊರಿನವರಿಗೆ ಮಾಹಿತಿ ಒದಗಿಸಬೇಕು' ಎಂಬ ಬೇಡಿಕೆಗಳನ್ನು ಕಿರವತ್ತಿ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಆಗ್ರಹಿಸಿದರು. ನೆರೆದಿದ್ದ ಪ್ರತಿಭಟನಾಕಾರರು ಈ ಮಾತನ್ನು ಬೆಂಬಲಿಸಿದರು.

ಕಿರವತ್ತಿಯ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಅತ್ಯಾಚಾರ ಘಟನೆ ಖಂಡಿಸಿದರು.‌'ಸಂತ್ರಸ್ಥ‌ ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು. ಉನ್ನತ ಗುಣಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು' ಎಂದು ಒತ್ತಾಯಿಸಿದರು.

ಮಹಿಳಾ ಸಂಘಟನೆಗಳಿಂದಲೂ ಮನವಿ:
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಮಹಿಳಾ ಸಂಘಟನೆಯವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹತ್ತು-ಹಲವು ಸಂಘಟನೆಯವರು ಪ್ರತಿಭಟನೆಯಲ್ಲಿ ಭಾಗವಹಿಸಿ 'ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಹಕ್ಕೊತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಎಲ್ಲರೂ ನ್ಯಾಯಕ್ಕಾಗಿ ಒತ್ತಾಯಿಸಿದ್ದು, ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಹಾಗೂ ನೆರೆದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು. ಕಾನೂನಿನ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಹೇಳಿದರು. ಅದಾಗಿಯೂ, 'ನಿಗದಿತ ಸಮಯದ ಒಳಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟಿಸುತ್ತೇವೆ' ಎಂದು ಎಚ್ಚರಿಸಿದರು.

ಪೊಲೀಸರಿಗೆ ತಲೆಬಿಸಿ ತಂದ ಗಾಂಜಾ ಗುಂಗು!
'ಕಿರವತ್ತಿ ಹಾಗೂ ಸುತ್ತಲಿನ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗಾಂಜಾ ಮಾರಾಟ ನಡೆದಿದೆ. ಅಕ್ರಮ ಸರಾಯಿ ಮಾರಾಟ‌ ಸಹ ಜೋರಾಗಿದೆ. ದೂರು ನೀಡಿದರೂ ಕ್ರಮವಾಗಿಲ್ಲ' ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ದೂರಿದರು. 'ನಶೆಯ ಗುಂಗಿನಲ್ಲಿಯೇ ಅತ್ಯಾಚಾರ ನಡೆದಿದೆ. ಮೊದಲು ಅಕ್ರಮ ತಡೆಯಿರಿ' ಎಂದು ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಧಾನ ಹೊರಹಾಕಿದರು.‌ ಈ ಹೇಳಿಕೆ ವಿಡಿಯೋ ಚಿತ್ರಿಕರಣ ನಡೆಸಿದ ಮಾಧ್ಯಮದವರ ಮೊಬೈಲನ್ನು ಪೊಲೀಸರು ಕಿತ್ತುಕೊಂಡಿದ್ದು, ನಂತರ ಮರಳಿಸಿದರು.

ಪ್ರಮುಖರಾದ ರಜತ್ ಖಾನಾಪುರ, ಬೇಬಿ ಅಮಿನಾ, ರಾಘು ಗೊಂದಿ, ಶಾಹಿನ್ ಮುಜಾವರ, ಬಾಬಾಜಾನ್ ಶೇಖ್, ಶಿವಲೀಲ ಹಣಸಗಿ, ಗಂಗಾಧರ ಲಮಾಣಿ, ಮಾರುತಿ ಕಳಸೂರಕರ್, ಮಹೇಶ ಪೂಜಾರ್, ಮಧುರಾ ಹೆಗಡೆ, ವಿಲ್ಸನ್‌ ಫರ್ನಾಂಡಿಸ್, ವಿಠಲ ಶಲಕೆ, ಅನ್ವರ್ ನಜೀರ ಅಹ್ಮದ್ ನದಾಫ, ಸಲೀಂ ಅಲ್ಲಾಭಕ್ಷ ವಂಟನಾಳ, ಪರಶುರಾಮ ಚಲವಾದಿ, ರವಿ ನಾಯ್ಕ, ರಿಯಾನ್ ಉಸ್ಮಾನ್ ಪಟೇಲ್ ಸೇರಿ ಸುತ್ತಲಿನ ಹಲವು ಹಳ್ಳಿಗಳ ಸಾವಿರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿದ್ದರು.