
ತನ್ನ ಕಾರ್ಯಚಟುವಟಿಕೆ ನಿಲ್ಲಿಸಿದ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ
News Details
ಕಳೆದ ಮೂರು ದಶಕದಿಂದ ನಿರಂತರ ವಿದ್ಯುತ್ ಉತ್ಪಾದಿಸುತ್ತಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ ಇದೀಗ ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದೆ. ರಿಯಾಕ್ಟರಿನ ಶೀತಕ ಕೊಳವೆಯನ್ನು ಹೊಸದಾಗಿ ಜೋಡಿಸುವುದಕ್ಕಾಗಿ ಅಣು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಸದ್ಯ ಕೈಗಾ ಅಣು ವಿದ್ಯುತ್ ಕೇಂದ್ರದಲ್ಲಿ ನಾಲ್ಕು ಘಟಕಗಳಿವೆ. ಐದು ಹಾಗೂ ಆರನೇ ಘಟಕ ನಿರ್ಮಾಣ ಕೆಲಸ ನಡೆಯುತ್ತಿದೆ. ನಿರ್ವಹಣೆ ಕಾರಣಕ್ಕಾಗಿ ಆಗಾಗ ಕೈಗಾ ಅಣು ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ಮಾಡಲಾಗುತ್ತದೆ. ಆದರೆ, ಇದೇ ಮೊದಲ ಬಾರಿ ಶೀತಕ ಕೊಳವೆ ಅಳವಡಿಸುವುದಕ್ಕಾಗಿ ಮೊದಲ ಘಟಕದ ಕಾರ್ಯವನ್ನು ನಿಲ್ಲಿಸಲಾಗಿದೆ.
ಈ ಘಟಕವೂ 2018ರ ಡಿಸೆಂಬರ್ 10ರಂದು ಸತತ 962 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ಇಂಗ್ಲೆoಡ್‌ನ ಹೇಶಮ್ ಅಣುಸ್ಥಾವರದ ದಾಖಲೆಯನ್ನು ಮೀರಿಸಿತ್ತು. 1998ರಲ್ಲಿ ಕಾರ್ಯಾರಂಭಿಸಿದ ಮೊದಲ ಘಟಕವು 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. 27 ವರ್ಷಗಳಿಂದ ವಿದ್ಯುತ್ ಉತ್ಪಾದಿಸುತ್ತಿದ್ದ ಘಟಕದ ಚಟುವಟಿಕೆ ಮೊದಲ ಬಾರಿ ಸ್ಥಗಿತಗೊಂಡಿದೆ.
ಅಣು ವಿದ್ಯುತ್ ಉತ್ಪಾದನೆ ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್‌ಗಳನ್ನು ರವಾನಿಸುವ ಮತ್ತು ಸ್ಥಾವರದಲ್ಲಿ ತಾಪಮಾನ ನಿಯಂತ್ರಿಸುವ 306 ಕೊಳವೆಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುವ ಸಾಧ್ಯತೆಗಳಿವೆ. ಹೀಗಾಗಿ ಅವುಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದೆ. ಆ ಕೊಳವೆಗಳು 25-30 ವರ್ಷ ಬಾಳಿಕೆ ಬರುತ್ತವೆ. ಸದ್ಯ ಹೊಸ ಕೊಳವೆ ಅಳವಡಿಸಲು ಒಂದು ವರ್ಷ ಸಮಯ ಬೇಕಾಗಬಹುದಾಗಿದ್ದು, ಅದಾದ ನಂತರ ಒಂದನೇ ಘಟಕ ಮತ್ತೆ ಕೆಲಸ ಮಾಡಲಿದೆ.