
ದಾಂಡೇಲಿ ಗಾಂಧಿನಗರದಲ್ಲಿ ಕೋಟಿ - ಕೋಟಿ ನಕಲಿ ನೋಟು ಪತ್ತೆ.
News Details
ದಾಂಡೇಲಿಯ ಗಾಂಧೀನಗರದಲ್ಲಿನ ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ನಕಲಿ ನೋಟು ಸಿಕ್ಕಿದೆ. ನೋಟಿನ ಮೇಲೆ `ರಿವರ್ಸ ಬ್ಯಾಂಕ್ ಆಫ್ ಇಂಡಿಯಾ' ಎಂದು ಬರೆಯಲಾಗಿದ್ದು, ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇಲ್ಲಿನ ನೂರಜಾನ್ ಜುಂಜವಾಡ್ಕರ್ ಎಂಬಾತರು ಗೋವಾದಲ್ಲಿ ವಾಸವಾಗಿರುವ ಅರ್ಷದ್ ಖಾನ್ ಎಂಬಾತರಿಗೆ ಮನೆ ಬಾಡಿಗೆ ನೀಡಿದ್ದರು. ಆದರೆ, ಒಂದು ತಿಂಗಳಿನಿAದ ಆ ಮನೆಯಲ್ಲಿ ಯಾರೂ ವಾಸವಾಗಿರಲಿಲ್ಲ. ಮನೆ ಚಿಲಕ ಸಹ ಸರಿಯಾಗಿ ಹಾಕಿರಲಿಲ್ಲ. ದಾಂಡೇಲಿ ನಗರ ಠಾಣೆ ಪೊಲೀಸರು ಬಾಡಿಗೆ ಮನೆಯೊಳಗೆ ನುಗ್ಗಿ ಪರಿಶೀಲನೆ ನಡೆಸಿದರು.
ಆಗ, 500ರೂ ಮುಖಬಲೆಯ 14 ಕೋಟಿ ರೂಪಾಯಿಯಷ್ಟು ನೋಟುಗಳು ಸಿಕ್ಕಿದವು. ಎಲ್ಲಾ ನೋಟುಗಳ ಮೇಲೆ `0000' ಎಂದು ಬರೆಯಲಾಗಿತ್ತು. ಗವರ್ನರ್ ಸಹಿ ಇರಲಿಲ್ಲ. `ಮೂವಿ ಶೂಟಿಂಗ್ ಪರ್ಪಸ್ ಓನ್ಲಿ' ಎಂದು ಸಹ ನೋಟಿನ ಮೇಲೆ ನಮೂದಿಸಲಾಗಿತ್ತು. ಈ ಪ್ರಮಾಣದಲ್ಲಿ ನೋಟು ಸಿಕ್ಕಿದ ಕಾರಣ ಜನ ಅಚ್ಚರಿವ್ಯಕ್ತಪಡಿಸಿದರು. ಅದಾದ ನಂತರ ನೋಟುಗಳು ನಕಲಿ ಎಂದು ಅರಿವಾಗಿ ಇನ್ನಷ್ಟು ಆತಂಕ್ಕೆ ಒಳಗಾದರು. ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಎಂದು ಅರಿತು ನಿರಾಳರಾದರು.
ಅದಾಗಿಯೂ ಪೊಲೀಸರು ನೈಜ ವಿಷಯದ ಹುಟುಕಾಟ ನಡೆಸಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯ ವಿಚಾರಣೆಗೆ ಮುಂದಾಗಿದ್ದಾರೆ.