
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಪೊಲೀಸರು ದಬ್ಬಾಳಿಕೆ ನಡೆಸಿದ ಆರೋಪ
News Details
ಗೋರಕ್ಷಣೆಗಾಗಿ ಶ್ರಮಿಸುತ್ತಿರುವ ಹಿಂದು ಕಾರ್ಯಕರ್ತನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ' ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಭಟ್ಕಳ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ಶಿರಸಿ ಪೊಲೀಸರು ಶ್ರೀನಿವಾಸ ನಾಯ್ಕ ಎಂಬಾತರನ್ನು ಠಾಣೆಗೆ ಕರೆಯಿಸಿದ್ದರು. ಈ ವೇಳೆ ಶ್ರೀನಿವಾಸ ನಾಯ್ಕ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಶ್ರೀನಿವಾಸ ನಾಯ್ಕ ಆಸ್ಪತ್ರೆಗೆ ಸಹ ದಾಖಲಾಗಿದ್ದರು. ಈ ಹಿನ್ನಲೆ ಪೊಲೀಸರ ನಡೆ ಖಂಡಿಸಿ ಭಟ್ಕಳದಲ್ಲಿ ಮಂಗಳವಾರ ರಾತ್ರಿಯೇ ಪ್ರತಿಭಟನೆ ನಡೆಯಿತು. ಬುಧವಾರ ಸಹ ಈ ವಿಷಯವಾಗಿ ಕೆಲ ಬೆಳವಣಿಗೆಗಳು ನಡೆದವು.
`ಪೊಲೀಸರು ಕ್ಷಮೆ ಕೇಳಬೇಕು' ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು. ಕೊನೆಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಪ್ರತಿಭಟನಾಕಾರರ ಜೊತೆ ಮಾತುಕಥೆ ನಡೆಸಿದರು.
ಪೊಲೀಸರ ಸ್ಪಷ್ಠನೆ:
`ಹಿಂದು ಸಂಘಟನೆಯ ಶ್ರೀನಿವಾಸ ನಾಯ್ಕ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಅವರಿಗೆ ಎಚ್ಚರಿಕೆ ಮಾತ್ರ ನೀಡಲಾಗಿದೆ' ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ 996 ರೌಡಿ ಶೀಟರ್ ಇದ್ದಾರೆ. ಅವರೆಲ್ಲರ ಮೇಲೆ ಪೊಲೀಸರು ನಿಗಾವಿರಿಸಿದ್ದಾರೆ. ಹಲ್ಲೆ ನಡೆಸಿದ್ದಾರೆ ಎಂಬುದು ನಾಟಕ' ಎಂದು ಅವರು ಸ್ಪಷ್ಠಪಡಿಸಿದ್ದಾರೆ. `ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ, ಐಜಿಪಿ ಅವರಿಗೆ ಮಾಹಿತಿ ನೀಡಲಾಗಿದೆ. ಸಮಾಜಘಾತುಕ ಕೃತ್ಯದಿಂದ ದೂರವಿದ್ದವರನ್ನು ಗುಂಡಾ ಪಟ್ಟಿಯಿಂದ ಹೊರಗಿಡಲಾಗುತ್ತದೆ. ಅದೇ ಕೃತ್ಯ ಮುಂದುವರೆಸುವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ' ಎಂದು ಎಚ್ಚರಿಸಿದ್ದಾರೆ.