
ಗೋವಾ ಪ್ರವಾಸಿಗರಿಗೆ ಹೊಸ ನಿಯಮ – ರಸ್ತೆಪಕ್ಕ ಅಡುಗೆ ನಿಷೇಧ
News Details
ಗೋವಾ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪ್ರವಾಸಿಗರು ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದನ್ನು ನಿಷೇಧಿಸಲಾಗಿದ್ದು, ಅಲ್ಲಿನ ಖಾಸಗಿ ಹೊಟೇಲ್ ಅಭಿವೃದ್ಧಿಗೆ ಸರ್ಕಾರವೇ ಆಸಕ್ತಿವಹಿಸಿದೆ.
ಇದಕ್ಕಾಗಿ ಗೋವಾ ಪ್ರವೇಶದಲ್ಲಿಯೇ ವಾಹನ ತಪಾಸಣೆ ನಡೆಸಲಾಗುತ್ತದೆ. ವಾಹನದಲ್ಲಿ ಸಿಲೆಂಡರ್, ಊಟದ ಸಾಮಗ್ರಿ ಸಿಕ್ಕರೆ ಅದನ್ನು ಜಪ್ತು ಮಾಡುವುದಾಗಿ ಸರ್ಕಾರ ಆದೇಶಿಸಿದೆ. ಅದಾಗಿಯೂ, ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದು ಕಂಡರೆ ಜೈಲಿಗೆ ಹಾಕುವುದಾಗಿ ಎಚ್ಚರಿಸಲಾಗುತ್ತಿದೆ.
ಪ್ರವಾಸೋದ್ಯಮ ವಿಷಯದಲ್ಲಿ ಗೋವಾಗೆ ವಿಶೇಷ ಹೆಸರಿದೆ. ದೇಶ-ವಿದೇಶಗಳ ಜನ ಅಲ್ಲಿಗೆ ಆಗಮಿಸುತ್ತಾರೆ. ಕಾರು-ಬೈಕಿನಲ್ಲಿ ಬರುವ ಅನೇಕರು ತಾವೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದು, ಇದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಬಾರದು ಎಂದು ಗೋವಾ ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.
ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದರೂ, ಅಲ್ಲಿನ ಹೊಟೇಲ್ ಹಾಗೂ ರೆಸಾರ್ಟ ಲಾಭಿ ಇಲ್ಲಿ ಎದ್ದು ತೋರುತ್ತಿದೆ. ಹೊಟೇಲ್ ಊಟ ಋಚಿಸದಿದ್ದರೂ ಗೋವಾಗೆ ಬಂದವರು ಇದೀಗ ಹೊಟೇಲ್ ಮೊರೆ ಹೋಗುವುದು ಅನಿವಾರ್ಯವಾಗಿದೆ.
ತಮ್ಮ ಊರಿನ ಆಹಾರ ಪದ್ಧತಿಯನ್ನು ಅನುಸರಿಸಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡುವವರಿಗೆ ಇದರಿಂದ ಸಮಸ್ಯೆಯಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಅಡುಗೆ ಮಾಡುವುದು ಕಂಡರೆ ಆ ವಾಹನವನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ಎಚ್ಚರಿಸುತ್ತಿದ್ದಾರೆ.